ಗ್ರೌಪರ್

ಸೆರಾನಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಮೀನುಗಳಿರುವ ಸಾಮಾನ್ಯ ಹೆಸರು. ಇವು ಸಮಶೀತೋಷ್ಣವಲಯದ ಕಡಲುಗಳಲ್ಲಿ ವಾಸಿಸುತ್ತವೆ; ವೆಸ್ಟ್ ಇಂಡೀಸ್, ಅಮೆರಿಕದ ಸಂಯುಕ್ತ ಸಂಸ್ಥಾನಗಳ ದಕ್ಷಿಣಪ್ರದೇಶಗಳ ಕಡಲುಗಳು ಇವುಗಳ ಮುಖ್ಯ ವಾಸಸ್ಥಳ. ಭಾರತದಲ್ಲೂ ಕೆಲವು ಪ್ರಭೇದಗಳಿವೆ. ಬಂಡೆಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬರುವುದರಿಂದ ಇವಕ್ಕೆ ರಾಕ್ ಬಾಸ್ ಎಂದು ಹೆಸರೂ ಇದೆ. ಕಡಲ ಬಾಸ್ ಪರ್ಯಾಯನಾಮ. ಮಧ್ಯಮ ಗಾತ್ರದಿಂದ ದೈತ್ಯಾಕಾರದವರೆಗೂ ಬೆಳೆಯುವ ಮೀನುಗಳಿವು. ಕೋನಿ ಎಂಬುದು ಗ್ರೌಪರುಗಳಲ್ಲೆಲ್ಲ ಅತ್ಯಂತ ಚಿಕ್ಕ ಮೀನು ; ಇದರ ಉದ್ದ ಕೇವಲ 9; ಬಣ್ಣ ಕೆಂಪುಮಿಶ್ರಿತ ಬೂದು. ಮೈಮೇಲೆ ಅಲ್ಲಲ್ಲಿ ನೀಲಿವರ್ಣದ ಚುಕ್ಕೆಗಳಿವೆ. ಜ್ಯೂ ಮೀನುಗಳು ಗ್ರೌಪರುಗಳಲ್ಲೆಲ್ಲ ಅತ್ಯಂತ ದೊಡ್ಡವು. ಇವು 7 ಉದ್ದವಿದ್ದು ಸುಮಾರು 500 ಪೌಂ. ತೂಗುತ್ತವೆ. ಗ್ರೌಪರುಗಳಲ್ಲೆಲ್ಲ ಅತಿಮುಖ್ಯವಾದವು ಎಪಿನೆಫೆಲಸ್ ಮತ್ತು ಮಿಕ್ಟಿ ರೋಪರ್ಕ ಎಂಬ ಎರಡು ಜಾತಿಗಳಿಗೆ ಸೇರಿದ ವಿವಿಧ ಪ್ರಭೇದಗಳು. ಇವುಗಳ ಬಣ್ಣ ಮತ್ತು ಗಾತ್ರಗಳಲ್ಲಿ ಅನೇಕ ವ್ಯತ್ಯಾಸಗಳಿವೆ.

ಗ್ರೌಪರುಗಳ ವಿಶೇಷ ಲಕ್ಷಣವೆಂದರೆ ತಮ್ಮ ದೇಹದ ಬಣ್ಣವನ್ನು ಬದಲಿಸುತ್ತಿರುವುದು. ಚುಕ್ಕಿ ಜ್ಯೂ ಮೀನು ನಾಲ್ಕು ರೀತಿಯ ಬಣ್ಣಗಳನ್ನು - ದಟ್ಟ ಕಪ್ಪು, ಕಪ್ಪು ಮಚ್ಚೆಗಳಿಂದ ಕೂಡಿದ ಬೂದು, ಕಪ್ಪು ಮಚ್ಚೆಗಳಿಂದ ಕೂಡಿದ ಕೆನೆ ಬಣ್ಣ ಮತ್ತು ಸಂಪೂರ್ಣ ಕೆನೆ ಬಣ್ಣಗಳನ್ನು ಪ್ರದರ್ಶಿಸುತ್ತದೆ. ನಾಸ್ಸಾ ಗ್ರೌಪರ್ ಎಂಬುದು ತನ್ನ ಮೈಬಣ್ಣವನ್ನು ಕೆನೆಯಿಂದ ಕಪ್ಪುಬಣ್ಣಕ್ಕೆ ಕ್ಷಣಾರ್ಧದಲ್ಲಿ ಬದಲಿಸುತ್ತದೆ. ಈ ರೀತಿಯ ಬಣ್ಣ ಬದಲಾವಣೆಗೆ ಈ ಮೀನುಗಳ ಚರ್ಮದಲ್ಲಿರುವ ವರ್ಣ ದ್ರವ್ಯ ಜೀವಕೋಶಗಳು ಕಾರಣ. ಚರ್ಮದಲ್ಲಿ 4 ಅಥವಾ 5 ಬಗೆಯ ವಿಶೇಷ ಜೀವ ಕೋಶಗಳಿವೆ. ಇವುಗಳ ಒಂದುಗೂಡುವಿಕೆ ಹಾಗೂ ಇವುಗಳ ಸಂಕೋಚನ ಮತ್ತು ವಿಕಸನ ರೀತಿಗಳನ್ನು ಅನುಸರಿಸಿ ದೇಹದ ಬಣ್ಣ ಬದಲಾಗುತ್ತಿರುತ್ತದೆ. ವಿಶ್ರಾಂತಿ ಪಡೆಯುವಾಗ, ಜಲಸಸ್ಯಗಳ ಮಧ್ಯೆ ಅಡಗಿಕೊಂಡು ಶತ್ರುಗಳಿಂದ ತಪ್ಪಿಸಿಕೊಳ್ಳಲು ಈ ವರ್ಣ ಪರಿವರ್ತನೆ ಸಹಾಯಕ ಎಂದು ಕಾಣುತ್ತದೆ. ಗ್ರೌಪರುಗಳು ಮಾಂಸಾಹಾರಿಗಳು; ಇತರ ಬಗೆಯ ಮೀನುಗಳು ಮತ್ತು ಮುಳ್ಳು ಲಾಬ್‍ಸ್ಟರ್‍ಗಳು ಇವುಗಳ ಮೆಚ್ಚಿನ ಆಹಾರ. ಗ್ರೌಪರುಗಳ ಜೀವನಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರತೆತಿಲ್ಲ. ಬಹುಶಃ ವಸಂತ ಋತುವಿನಲ್ಲಿ ಇವು ಮೊಟ್ಟೆಗಳನ್ನಿಡುತ್ತವೆ.					(ಬಿ.ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ